ಕಾಳಿಂಗ ಸರ್ಪ

ರೆಪ್ಟಿಲಿಯಾ ವರ್ಗದ ಸ್ಖಮಾಟ ಗಣದ ಎಲಾಪಿಡೆ ಕುಟುಂಬದ ಸದಸ್ಯ. ಕನ್ನಡದ ಹೆಸರು ಕಾಳಿಂಗ ಸರ್ಪ. ಆಂಗ್ಲಭಾಷೆಯ ಕಿಂಗ್ ಕೋಬ್ರ. ವೈಜ್ಞಾನಿಕ ಹೆಸರು ಓಫಿಯೋಫಾಗಸ್ ಹನ್ನಾ. 

 ಇದು ತನ್ನ ಕೀರ್ತಿಗೆ ತಕ್ಕಂತೆ ಒಂದು ರಾಜ ಸರ್ಪ. ಎಲಾಪಿಡಿ ಕುಟುಂಬದ ಏಕಸದಸ್ಯವಾದರೂ ಕೆಲವು ವಿಜ್ಞಾನಿಗಳು ಓಫಿಯೋಫಾಗಸ್ ಪ್ರಭೇದದಲ್ಲಿ ಅನೇಕ ಹಾವುಗಳಿವೆ ಎಂದು ಅಭಿಪ್ರಾಯಪಡುತ್ತಾರೆ.  ಕಾಳಿಂಗ ಸರ್ಪ ಜಗತ್ತಿನಲ್ಲಿಯೇ ಅತ್ಯಂತ ಉದ್ದದ ವಿಷಕಾರಿ ಸರ್ಪ.  ಇದು 15ರಿಂದ 18 ಅಡಿಗಳವರೆಗೆ ಬೆಳೆಯಬಲ್ಲುದು. ಅದರ ಹೊಳೆಯುವ ಕಪ್ಪುಬಣ್ಣದ ದೇಹದುದ್ದಕ್ಕೂ ಇರುವ ಹಳದಿ ಪಟ್ಟೆಗಳೊಂದಿಗೆ ಶೋಭಿಸುತ್ತದೆ.  ವಯಸ್ಸಾದಂತೆ ಈ ಹಳದಿ ಪಟ್ಟೆಗಳು ಪೇಲವವಾಗುತ್ತವೆ.  ಆದರೂ ಇವುಗಳು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಬಣ್ಣಗಳಲ್ಲಿ - ಕಪ್ಪು, ಬೂದು, ದಟ್ಟ ಆಲಿವ್ ಹಸುರು, ಕಂದು ಹಳದಿ - ಕಂಡುಬರುತ್ತವೆ. ಕಣ್ಣಿನ ಪಕ್ಕದಲ್ಲಿನ ವಿಸ್ತøತವಾದ ಒಂದು ಜೊತೆ ಫಲಕಗಳು ಹಾಗೂ ಮೂರನೆ ಹಾಗೂ ನಾಲ್ಕನೇ ತುಟಿ ಫಲಕದ ನಡುವೆ ಇರದ ಬೆಣೆಯಾಕಾರದ ಫಲಕದಿಂದ ಇತರ ನಾಗರ ಹಾವುಗಳಿಂದ ಇದನ್ನು ಪ್ರತ್ಯೇಕಿಸಬಹುದು.

ನಾಗರಹಾವಿನೊಂದಿಗೆ ಹೋಲಿಸಿದಾಗ ಕಂಡುಬರುವ ಇನ್ನೊಂದು ವ್ಯತ್ಯಾಸವೆಂದರೆ ಇದರ ಹೆಡೆಯ ಆಕಾರ.  ಅದು ನಾಗರಹಾವಿನದರಷ್ಟು ಅಗಲವಾಗಿರುವುದಿಲ್ಲ.  ಬಹಳ ಉದ್ದದ ಹಾವಾದ್ದರಿಂದ, ಕೆಣಕಿದಾಗ ತನ್ನ ದೇಹವನ್ನು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಎತ್ತಿ ಸರಿಸುಮಾರು ಎದುರಿಗೆ ನಿಂತಿರುವವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಬಲ್ಲುದು.

ಕಾಳಿಂಗ ಸರ್ಪಗಳು ಮಳೆಕಾಡುಗಳು, ಉಷವಲಯದ ತೇವಭರಿತ ಕಾಡುಗಳಿಂದ ತೊಡಗಿ ಕಾಂಡ್ಲವನಗಳು, ಬಿದಿರು ಮೆಳೆ ಹಾಗೂ ಕಾಡಿನ ನೀರಿನ ಝರಿಗಳ ಬಳಿ ಕಂಡುಬರುತ್ತವೆ.  ಇವುಗಳ ವ್ಯಾಪ್ತಿ ಹಿಮಾಲಯದ ಕೆಳಗಿನ ದಕ್ಕನ್ ಪ್ರಸ್ಥಭೂಮಿ, ನೇಪಾಳ, ಭೂತಾನ್, ಮಾಯ್ಮ್ನಾರ್, ಧೈಲಾಂಡ್, ಕ್ಯಾಂಪೂಚಿಯಾ, ಲಾವೋಸ್, ವಿಯಟ್ನಾಂ, ದಕ್ಷಿಣ ಚೀನಾ, ಇಂಡೋನೇಷಿಯ (ಸುಮಾತ್ರ, ಜಾವಾ, ಬೋರ್ನಿಯೋ) ಮತ್ತು ಫಿಲಿಪೈನ್ಸ್ ಒಳಗೊಂಡಂತೆ ದಕ್ಷಿಣ ಪೂರ್ವ ಏಷ್ಯದ ಅರಣ್ಯಪ್ರದೇಶಗಳು.

ಕಾಳಿಂಗ ಸರ್ಪದ ಆಹಾರ ಕೇವಲ ಇತರೆ ಹಾವುಗಳು. ಅತಿ ಅಪರೂಪವಾಗಿ ಉಡಗಳು. ಇವು ಉತ್ತಮ ಈಜುಗಾರ ಹಾವುಗಳು, ಮರವನ್ನೂ ಚೆನ್ನಾಗಿ ಹತ್ತಬಲ್ಲವು.

ಅತಿವಿಷಕಾರಿ ಹಾವಾದ ಇದು ಒಂದು ಆನೆಯನ್ನು ಕೊಲ್ಲುವಷ್ಟು ವಿಷವನ್ನು ಹೊಂದಿರುತ್ತದೆ. ಆದರೆ, ಇದರ ವಿಷ ವಿಷಸತ್ವಕ್ಕಿಂತ ವಿಷದ ಪ್ರಮಾಣ ಸಾವನ್ನು ತರುತ್ತದೆ ಎಂಬುದು ಗವiನಾರ್ಹ.  ಈ ಹಾವು ಒಮ್ಮೆ ಕಚ್ಚಿದಾಗ ಏಳು ಮಿಲಿ ಲೀಟರ್ ವಿಷವನ್ನು ದೇಹಕ್ಕೆ ಸೇರಿಸುವುದರಿಂದ ಶೀಘ್ರವಾಗಿ ಸಾವನ್ನು ತರುತ್ತದೆ.

ಕಾಳಿಂಗ ಸರ್ಪಗಳು ಅತಿ ವಿರಳವಾಗಿ ಮನುಷ್ಯನ್ನು ಕಚ್ಚುತ್ತವೆ. ಇದರ ಜಾಗತಿಕ ವ್ಯಾಪ್ತಿಯಲ್ಲಿ ಕೇವಲ 32 ಕಚ್ಚಿದ ಪ್ರಸಂಗಗಳು ದಾಖಲಾಗಿದ್ದು, ಇದರ ಒಂದು ಮೂರನೆಯದರಷ್ಟು ಪ್ರಸಂಗದಲ್ಲಿ ಮಾತ್ರ ಸಾವುಂಟಾಗಿದೆ. ಈ ಹಾವಿನ ಕಡಿತಕ್ಕೆ ಪ್ರತಿವಿಷ ಭಾರತದಲ್ಲಿ ದೊರಕುವುದಿಲ್ಲ.

ಈ ಹಾವುಗಳು ತಮ್ಮ 5 - 6ನೇ ವಯಸ್ಸಿನಲ್ಲಿ ಲೈಂಗಿಕ ಪ್ರಬುದ್ಧತೆ ಪಡೆಯುತ್ತವೆ. ಜೀವನವನ್ನೆಲ್ಲಾ ಏಕಾಂಗಿಯಾಗಿ ಕಳೆಯುವ ಇವು ಸಂತಾನೋತ್ಪತ್ತಿಗಾಗಿ ಮಾತ್ರ ಜೊತೆಯಾಗುತ್ತವೆ. ವಸಂತಕಾಲದಲ್ಲಿ ಗಂಡು ಹೆಣ್ಣುಗಳು ಕೂಡುತ್ತವೆ. ಹೆಣ್ಣು ಹೊರಸೂಸುವ ವಾಸನೆಯನ್ನನುಸರಿಸಿ ಹಲವಾರು ಗಂಡು ಹಾವುಗಳು ಒಂದು ಹೆಣ್ಣಿಗಾಗಿ ಬರುತ್ತವೆ. ಇಲ್ಲಿ ಹೋರಾಟ ನಡೆದು ಗೆದ್ದ ಹಾವು ಹೆಣ್ಣಿನೊಂದಿಗೆ ಹಲವಾರು ಬಾರಿ ಕೂಡಿದ ನಂತರ ತಮ್ಮ ಏಕಾಂಗಿ ಜೀವನಕ್ಕೆ ಹಿಂದಿರುಗುತ್ತವೆ. ಹೆಣ್ಣು ಮುಂದಿನ ತಿಂಗಳುಗಳಲ್ಲಿ ಗೂಡು ಕಟ್ಟಲು ಸೂಕ್ತ ಜಾಗ ಹುಡುಕುತ್ತದೆ.

ಜಗತ್ತಿನ ಹಾವುಗಳಲ್ಲಿ ಕಾಳಿಂಗ ಸರ್ಪ ಮಾತ್ರ ಗೂಡು ಕಟ್ಟುವ ಹಾವು. ಕಾಲುಗಳಿಲ್ಲದ ಇವು ತಮ್ಮ ಉದ್ದ ಶರೀರ ಹಾಗೂ ದೇಹದ ಮಾಂಸ ಖಂಡಗಳನ್ನು ಬಳಸಿಕೊಂಡು ಉತ್ತಮ ಕೌಶಲದ ಗೂಡನ್ನು ರಚಿಸುತ್ತವೆ. ಹೆಣ್ಣು ಒಮ್ಮೆಗೆ 20 - 50 ಮೊಟ್ಟೆಗಳನ್ನಿಟ್ಟು  ಸುಮಾರು 70 - 90 ದಿನಗಳವರೆಗೆ ಕಾವಲು ಕಾಯುತ್ತವೆ. ಇನ್ನೇನು ಮರಿಗಳು ಹೊರ ಬರುತ್ತವೆ ಎನ್ನುವ ಸಂದರ್ಭದಲ್ಲಿ ಹೆಣ್ಣು ಹಾವು ಹೊರಟುಹೋಗುತ್ತದೆ. ಬಹುಶಃ ಕಾಳಿಂಗ ಸರ್ಪಗಳು ಹಾವು ತಿನ್ನುವ ಹಾವುಗಳಾದ್ದರಿಂದ ಈ ಅಭ್ಯಾಸ ಬಂದಿರಬೇಕು. ಹುಟ್ಟಿದ ಕೆಲವು ವಾರಗಳವರೆಗೆ ಮೊಟ್ಟೆಯೊಳಗಿರುವ ಹಳದಿ ಭಾಗದ ಉಳಿಗೆಗಳನ್ನು ತಿಂದು ಬದುಕುವ ಇವು ಆನಂತರ ಕಾಡಿನೊಳಗೆ ಹೋಗಿ ಸಣ್ಣ ಸಣ್ಣ ಹಾವುಗಳನ್ನು ಹಿಡಿದು ತಿನ್ನತೊಡಗುತ್ತವೆ.  ಕಾಳಿಂಗ ಸರ್ಪಕ್ಕೆ ಯಾವುದೇ ನೈಸರ್ಗಿಕ ಶತ್ರುಗಳಿಲ್ಲ. ಆದರೆ, ಇದರ ಮರಿಗಳು ಇತರ ಹಾವುಗಳಿಗೆ, ಪಕ್ಷಿ, ಉಡ, ಮುಂಗುಸಿ, ಕಾಡುಹಂದಿ ಮುಂತಾದವುಗಳಿಗೆ ಆಹಾರವಾಗುವುದುಂಟು.

ಮಾನವನಿಂದ ಕಾಡಿನ ಆತಿಕ್ರಮಣದಿಂದಾಗಿ ಕಾಳಿಂಗ ಸರ್ಪಕ್ಕೆ ಆವಾಸದ ಕೊರತೆಯಾಗುತ್ತಿದೆ. ಇದರಿಂದ ಮಾನವ - ಕಾಳಿಂಗ ಸರ್ಪ ಸಂಘರ್ಷ ಹೆಚ್ಚುವುದು. ಕಾಳಿಂಗ ಸರ್ಪವನ್ನು ಭಾರತೀಯ ವನ್ಯಜೀವಿ ಕಾಯಿದೆ, 1972ರ ಎರಡನೇ ಪರಿಚ್ಛೇದಲ್ಲಿ ಸೇರಿಸಲಾಗಿದ್ದು, ಅವನ್ನು ಹಿಡಿಯುವುದು, ಕೊಲ್ಲುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಅದರ ಆವಾಸವನ್ನು ರಕ್ಷಿಸದಿದ್ದಲ್ಲಿ ಡ್ರಾಗನ್ನಿನಂತೆ ತನ್ನದೇ ನೆಲೆಯಿಂದ ಶಾಶ್ವತವಾಗಿ ಮರೆಯಾಗಲಿದೆ.

 

(ಪಿ. ಗೌರಿಶಂಕರ)

(ಪರಿಷ್ಕರಣೆ: ರೋಮ್ ವಿಟ್ಹೇಕರ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ